ಶ್ರೀರಮಣ ಸರ್ವೇಶ ಸರ್ವಗ
ಸಾರಭೋಕ್ತ ಸ್ವತಂತ್ರ ಸರ್ವದ-
ಪಾರಮಹಿಮೋದಾರ ಸದ್ಗುಣಪೂರ್ಣಗಂಭೀರ ।
ಸಾರಿದವರಘ ದೂರಗೈಸೀ
ಸೂರಿಜನರಿಗೆ ಸೌಖ್ಯನೀಡುವ
ಧೀರವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ ।। ೧ ।।
ಘನ್ನಮಹಿಮಾಪನ್ನ ಪಾಲಕ
ನಿನ್ನ ಹೊರತಿನ್ನನ್ಯ ದೇವರ
ಮನ್ನದಲಿ ನಾ ನೆನೆಸೆನೆಂದಿಗೂ ಬನ್ನ ಬಡಿಸದಿರೂ ।
ಎನ್ನ ಪಾಲಕ ನೀನೆ ಇರುತಿರೆ
ಇನ್ನು ಭವಭಯವೇಕೆ ಎನಗೆ
ಚನ್ನವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ ।। ೨ ।।
ಲಕುಮಿ ಬೊಮ್ಮ ಭವಾಮರೇಶರು
ಭಕುತಿಪೂರ್ವಕ ನಿನ್ನ ಭಜಿಸಿ
ಸಕಲಲೋಕಕೆ ನಾಥನೆನಿಪರೊ ಸರ್ವಕಾಲದಲಿ ।
ನಿಖಿಳಜೀವರ ಪೊರೆವ ದೇವನೆ
ಭಕುತಿ ನೀಯೆನಗೀಯದಿರಲು
ವ್ಯಕುತವಾಗ್ಯಪಕೀರ್ತಿ ಬಪ್ಪುದೊ ಶ್ರೀನಿಕೇತನನೆ ।। ೩ ।।
ಯಾಕೆ ಪುಟ್ಟದೊ ಕರುಣ ಎನ್ನೊಳು
ಸಾಕಲಾರೆಯ ನಿನ್ನ ಶರಣನ
ನೂಕಿಬಿಟ್ಟರೆ ನಿನಗೆ ಲೋಕದಿ ಖ್ಯಾತಿ ಬಪ್ಪುವುದೇ ।
ನೋಕನೀಯನೆ ನೀನೆ ಎನ್ನನು
ಜೋಕೆಯಿಂದಲಿ ಕಾಯೊ ಬಿಡದೆ
ಏಕದೇವನು ನೀನೆ ವೇಂಕಟ ಶೇಷಗಿರಿವಾಸ ।। ೪ ।।
ಅಂಬುಜಾಂಬಕ ನಿನ್ನ ಪದಯುಗ
ನಂಬಿಕೊಂಡೀ ಪರಿಯಲಿರುತಿರೆ
ಡೊಂಬೆಗಾರನ ತೆರದಿ ನೀ ನಿರ್ಭಾಗ್ಯ ಸ್ಥಿತಿತೋರೆ ।
ಬಿಂಬಮೂರುತಿ ನಿನ್ನ ಕರಗತ
ಕಂಬುವರವೇ ಗತಿಯೋ ವಿಶ್ವ
ಕುಟುಂಬಿ ಎನ್ನನು ಸಲಹೊ ಸಂತತ ಶೇಷಗಿರಿವಾಸ ।। ೫ ।।
ಸಾರಸಿರಿವೈಕುಂಠ ತ್ಯಜಿಸೀ
ಧಾರುಣೀಯೊಳು ಗೊಲ್ಲನಾಗಿ
ಚೋರಕರ್ಮವ ಮಾಡಿ ಬದುಕಿಹ ದಾರಿಗರಿಕಿಲ್ಲ ।
ಸಾರಿಪೇಳುವೆ ನಿನ್ನ ಗುಣಗಳ
ಪಾರವಾಗಿರುತಿಹವೊ ಜನರಿಗೆ
ಧೀರವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ ।। ೬ ।।
ನೀರ ಮುಳುಗೀ ಭಾರಪೊತ್ತೂ
ಧಾರುಣೀತಳವಗೆದು ಸಿಟ್ಟಿಲಿ
ಕ್ರೂರನುದರವ ಶೀಳಿ ಕರುಳಿನ ಮಾಲೆ ಧರಿಸಿದರೂ ।
ಪೋರ ವಿಪ್ರ ಕುಠಾರಿ ವನವನ
ಜಾರಿ ಕೋಪ ದಿಗಂಬರಾಶ್ವವ
ಏರಿ ಪೋದರು ಬಿಡೆನೊ ವೇಂಕಟಶೇಷಗಿರಿವಾಸ ।। ೭ ।।
ಲಕ್ಷ್ಮಿನಾಯಕ ಸಾರ್ವಭೌಮನೆ
ಪಕ್ಷಿವಾಹನ ಪರಮಪುರುಷನೆ
ಮೋಕ್ಷದಾಯಕ ಪ್ರಾಣಜನಕನೆ ವಿಶ್ವವ್ಯಾಪಕನೆ ।
ಅಕ್ಷಯಾಂಬರವಿತ್ತು ವಿಜಯನ
ಪಕ್ಷಪಾತವ ಮಾಡಿ ಕುರುಗಳ
ಲಕ್ಷ್ಯಮಾಡದೆ ಕೊಂದೆಯೋ ಶ್ರೀಶೇಷಗಿರಿವಾಸ ।। ೮ ।।
ಹಿಂದೆ ನೀ ಪ್ರಹ್ಲಾದಗೋಸುಗ
ಎಂದು ನೋಡದ ರೂಪಧರಿಸಿ
ಬಂದು ದೈತ್ಯನ ಒಡಲ ಬಗೆದೂ ಪೊರೆದೆ ಬಾಲಕನ ।
ತಂದೆತಾಯ್ಗಳ ಬಿಟ್ಟು ವಿಪಿನದಿ
ನಿಂದು ತಪಿಸುವ ಪಂಚವತ್ಸರ
ಕಂದನಾ ಧ್ರುವಗೊಲಿದು ಪೊರೆದೆಯೋ ಶೇಷಗಿರಿವಾಸ ।। ೯ ।।
ಮಡುವಿನೊಳಗಿಹ ಮಕರಿಕಾಲನು
ಪಿಡಿದು ಬಾಧಿಸೆ ಕರಿಯು ತ್ರಿಜಗ
ದ್ವಡೆಯ ಪಾಲಿಸೊ ಎನಲು ತಕ್ಷಣ ಬಂದು ಪಾಲಿಸಿದೆ ।
ಮಡದಿಮಾತನು ಕೇಳಿ ಬಲುಪರಿ
ಬಡವಬ್ರಾಹ್ಮಣ ಧಾನ್ಯಕೊಡಲು
ಪೊಡವಿಗಸದಳ ಭಾಗ್ಯ ನೀಡಿದೆ ಶೇಷಗಿರಿವಾಸ ।। ೧೦ ।।
ಪಿಂತುಮಾಡಿದ ಮಹಿಮೆಗಳ ನಾ
ನೆಂತು ವರ್ಣಿಸಲೇನುಫಲ ಶ್ರೀ
ಕಾಂತ ಎನ್ನನು ಪೊರೆಯೆ ಕೀರುತಿ ನಿನಗೆ ಫಲವೆನಗೆ ।
ಕಂತುಜನಕನೆ ಎನ್ನ ಮನಸಿನ
ಅಂತರಂಗದಿ ನೀನೆ ಸರ್ವದ
ನಿಂತು ಪ್ರೇರಣೆ ಮಾಳ್ಪೆ ಸರ್ವದ ಶೇಷಗಿರಿವಾಸ ।। ೧೧ ।।
ಶ್ರೀನಿವಾಸನೆ ಭಕ್ತಪೋಷನೆ
ಜ್ಞಾನಿಕುಲಗಳಿಗಭಯದಾಯಕ
ದೀನಬಾಂಧವ ನೀನೆ ಎನಮನದರ್ಥ ಪೂರೈಸೋ ।
ಅನುಪಮೋಪಮಜ್ಞಾನ ಸಂಪದ
ವಿನಯಪೂರ್ವಕವಿತ್ತು ಪಾಲಿಸೊ
ಜನುಮಜನುಮಕೆ ಮರೆಯಬೇಡವೋ ಶೇಷಗಿರಿವಾಸ ।। ೧೨ ।।
ಮದವು ಮತ್ಸರ ಲೋಭ ಮೋಹವು
ಒದಗಬಾರದು ಎನ್ನ ಮನದಲಿ
ಪದುಮನಾಭನೆ ಜ್ಞಾನ ಭಕ್ತಿ ವಿರಕ್ತಿ ನೀನಿತ್ತು ।
ಹೃದಯಮಧ್ಯದಿ ನಿನ್ನ ರೂಪವು
ವದನದಲಿ ತವ ನಾಮಮಂತ್ರವು
ಸದಯಪಾಲಿಸು ಬೇಡಿಕೊಂಬೆನು ಶೇಷಗಿರಿವಾಸ ।। ೧೩ ।।
ಅಂದನುಡಿ ಪುಸಿಯಾಗಬಾರದು
ಬಂದ ಭಾಗ್ಯವು ಪೋಗಬಾರದು
ಕುಂದು ಬಾರದೆ ನಿನ್ನ ಕರುಣವು ದಿನದಿ ವರ್ಧಿಸಲೀ ।
ನಿಂದೆ ಮಾಡುವ ಜನರ ಸಂಗವು
ಎಂದಿಗಾದರು ದೊರೆಯ ಬಾರದು
ಎಂದು ನಿನ್ನನು ಬೇಡಿಕೊಂಬೆನು ಶೇಷಗಿರಿವಾಸ ।। ೧೪ ।।
ಏನು ಬೇಡಲಿ ಎನ್ನ ದೇವನೆ
ಸಾನುರಾಗದಿ ಎನ್ನ ಪಾಲಿಸು
ನಾನಾವಿಧವಿಧ ಸೌಖ್ಯ ನೀಡು ಇಹಪರಂಗಳಲಿ ।
ಶ್ರೀನಿವಾಸನೆ ನಿನ್ನ ದಾಸಗೆ
ಏನುಕೊರೆತಿಲ್ಲೆಲ್ಲಿ ನೋಡಲು
ನೀನೆ ನಿಂತೀವಿಧದಿ ಪೇಳಿಸು ಶೇಷಗಿರಿವಾಸ ।। ೧೫ ।।
ಆರುಮುನಿದವರೇನು ಮಾಳ್ಪರೊ
ಆರುವೊಲಿದವರೇನು ಮಾಳ್ಪರೊ
ಆರು ನೇಹಿಗರಾರು ದ್ವೇಷಿಗಳಾರುದಾಶಿನರು ।
ಕ್ರೂರ ಜೀವರ ಹಣಿದು ಸಾತ್ವಿಕ
ಧೀರ ಜೀವರ ಪೊರೆದು ನಿನ್ನಲಿ
ಸಾರ ಭಕುತಿಯನಿತ್ತುಪಾಲಿಸೋ ಶೇಷಗಿರಿವಾಸ ।। ೧೬ ।।
ನಿನ್ನ ಸೇವೆಯನಿತ್ತು ಎನಗೇ
ನಿನ್ನ ಪದಯುಗ ಭಕ್ತಿ ನೀಡಿ
ನಿನ್ನ ಗುಣಗಳ ಸ್ತವನ ಮಾಡುವ ಜ್ಞಾನ ನೀನಿತ್ತು ।
ಎನ್ನ ಮನದಲಿ ನೀನೆ ನಿಂತು
ಘನ್ನ ಕಾರ್ಯವ ಮಾಡಿ ಮಾಡಿಸು
ಧನ್ಯನೆಂದೆನಿಸೆನ್ನ ಲೋಕದಿ ಶೇಷಗಿರಿವಾಸ ।। ೧೭ ।।
ಜಯ ಜಯತು ಶಠ ಕೂರ್ಮ ರೂಪನೆ
ಜಯ ಜಯತು ಕಿಟಿ ಸಿಂಹ ವಾಮನ
ಜಯ ಜಯತು ಭೃಗುರಾಮ ರಘುಕುಲಸೋಮ ಶ್ರೀರಾಮ ।
ಜಯ ಜಯತು ಶಿರಿ ಯದುವರೇಣ್ಯನೆ
ಜಯ ಜಯತು ಜನಮೋಹ ಬುದ್ಧನೆ
ಜಯ ಜಯತು ಕಲಿಕಲ್ಮಷಘ್ನನೆ ಕಲ್ಕಿನಾಮಕನೆ ।। ೧೮ ।।
ಕರುಣ ಸಾಗರ ನೀನೆ ನಿಜಪದ
ಶರಣವತ್ಸಲ ನೀನೆ ಶಾಶ್ವತ
ಶರಣಜನ ಮಂದಾರ ಕಮಲಾಕಾಂತ ಜಯವಂತ ।
ನಿರುತ ನಿನ್ನನು ನುತಿಸಿ ಪಾಡುವೆ
ವರದ ಗುರುಜಗನ್ನಾಥವಿಠ್ಠಲ
ಪರಮ ಪ್ರೇಮದಿ ಪೊರೆಯೊ ಎನ್ನನು ಶೇಷಗಿರಿವಾಸ ।। ೧೯ ।।
Comentários